ಮಳವಳ್ಳಿ : ಗಗನಚುಕ್ಕಿಯಲ್ಲಿ ಎರಡು ದಿನಗಳ ಕಾಲ ಜಲಪಾತೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ
ಸೆ 13 ಮತ್ತು 14ರಂದು ಗಗನಚುಕ್ಕಿ ಜಲಪಾತೋತ್ಸವವನ್ನು ವಿಭಿನ್ನವಾಗಿ ಆಚರಿಸುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ಮುಕ್ತವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ಶಾಸಕ ಪಿ ಎಂ ನರೇಂದ್ರಸ್ವಾಮಿ ತಿಳಿಸಿದರು
ಗಗನಚುಕ್ಕಿ ಜಲಪಾತೋತ್ಸವ ವೇದಿಕೆಯ ಬಳಿ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು . ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು 2.5 ಕೋಟಿ ರೂ ಅನುದಾನದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ,ಕಾರ್ಯಕ್ರಮದಲ್ಲಿ ಭಾಗವಗಹಿಸುವ ಸಾರ್ವಜನಿಕರಿಗೆ ಗುಣಮಟ್ಟದ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಭೋಜನದ ವಿಷಯದಲ್ಲಿ ಯಾವುದೇ ಲೋಪ ಸಂಭವಿಸದಂತೆ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಊಟದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದ ಹಾಕಿರುವ ಮಳಿಗೆ ಹಾಗೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದರು.
ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದು,ಮುಖ್ಯಮಂತ್ರಿಗಳು ಈ ಬಾರಿಯ ಗಗನಚುಕ್ಕಿ ಜಲಪಾತೋತ್ಸವ ನಡೆಸಲು ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಿದ್ದಾರೆ. ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ ಎಂದು ಹೇಳಿದರು.
ಜಲಪಾತೋತ್ಸವ ನಡೆಯುವ ಎರಡು ದಿನಗಳ ಕಾಲವೂ ಲೇಸರ್ ಶೋ ಅನ್ನು ಗಗನಚುಕ್ಕಿಯಲ್ಲಿ ಆಯೋಜಿಸಲಾಗಿದೆ. ಪ್ರತಿ ದಿನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲು 40 ಕಲಾ ತಂಡಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ 4 ಕಾಲೇಜುಗಳು ಈಗಾಗಲೇ ಕಲಾ ಪ್ರದರ್ಶನ ನೀಡಲು ನೊಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಗಗನಚುಕ್ಕಿಯಲ್ಲಿ ನದಿ ನೀರು ಬಳಸಿಕೊಂಡು ಅಕ್ವೇರಿಯಂ (ಮತ್ಸ್ಯಲಯ) ಸ್ಥಾಪನೆ ಮಾಡಲಾಗುವುದು. ಇದಕ್ಕೆ ರಾಜ್ಯ ಸರ್ಕಾರವು ಸಹ ಸಮ್ಮತಿ ಸೂಚಿಸಿದೆ. ಜಾಗ ಕೊಟ್ಟ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಸುಮಾರು 100 ಕೋಟಿ ವೆಚ್ಚದಲ್ಲಿ ತಗುಲುವ ಸಾಧ್ಯತೆ ಇದೆ. ಕಾಮಗಾರಿ ಪೂರ್ಣಗೊಂಡ ನಂತರ ಮತ್ಸ್ಯಲಯದ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದಗಿರುತ್ತದೆ.
ಅದೇ ರೀತಿ ಗಗನಚುಕ್ಕಿಯಲ್ಲಿ ಜಲ ಕ್ರೀಡೆಯನ್ನು ಸ್ಥಾಪನೆ ಮಾಡಲಾಗುವುದು. ಕಾರ್ ಕ್ಯಾಬ್ ಮಾಡಲು ಚಿಂತನೆ ನಡೆಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಜಲಕ್ರೀಡೆ ನಡೆಸಲು ಅವಕಾಶ ನೀಡಬೇಕಾಗಿದೆ. ಜಲಕ್ರೀಡೆ ಸ್ಥಾಪನೆಯಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಎಲ್ಲಾ ಭಾಗದಿಂದ ಎರಡು ದಿನಗಳ ಕಾಲ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 50 ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ವೇದಿಕೆ ಸಮೀಪದಲ್ಲೇ ನೀಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಿಂದ ಗಗನಚುಕ್ಕಿ ಜಲಪಾತ ನೋಡಲು 25 ಬಸ್ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರಿಗೆ ಊಟ ವಿತರಣೆಯ ಸಮಯದಲ್ಲಿ ತೊಂದರೆ ಆಗದಂತೆ 40 ಊಟದ ಕೌಂಟರ್ ತೆರೆಯಲಾಗಿದೆ,ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಆಂಬ್ಯುಲೆನ್ಸ್ ವ್ಯವಸ್ಥೆ. 60 ಶೌಚಾಲಯ ವ್ಯವಸ್ಥೆ . ಸುಮಾರು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಶಿವಮೂರ್ತಿ ಇತರರಿದ್ದರು
ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಕಲ ಸಿದ್ಧತೆ
Recent Comments
on Hello world!
