Friday, April 17, 2026
Homeಜಿಲ್ಲೆಅಪರಾಧ ತಡೆಗೆ ಪೊಲೀಸರ ಜೊತೆ ಆಟೋ ಚಾಲಕರು ಕೈಜೋಡಿಸಿ

ಅಪರಾಧ ತಡೆಗೆ ಪೊಲೀಸರ ಜೊತೆ ಆಟೋ ಚಾಲಕರು ಕೈಜೋಡಿಸಿ

ಮಂಡ್ಯ :- ಸಮಾಜದಲ್ಲಿ ಹೆಚ್ಚಳವಾಗುತ್ತಿರುವ ಅಪರಾಧ ಪ್ರಮಾಣ ತಡೆಯಲು ಪೊಲೀಸರ ಜೊತೆ ಆಟೋ ಚಾಲಕರು ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮನವಿ ಮಾಡಿದರು
ನಗರದ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆಯಲ್ಲಿ ಜೈ ಕರ್ನಾಟಕ ಆಟೋ ನಿಲ್ದಾಣದ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಅಪರಾಧ ಹೆಚ್ಚಳವಾಗುತ್ತಿದೆ, ಅಪರಾಧ ಕೃತ್ಯಕ್ಕೆ ಆಟೋ ಚಾಲಕರನ್ನು ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ, ಕೊಲೆ ಮರೆಮಾಚಲು ಶವ ಸಾಗಾಣಿಕೆಗೆ ಹಾಗೂ ಆರೋಪಿಗಳ ಪರಾರಿಗೆ ಆಟೋ ಬಳಕೆಯಾದ ನಿದರ್ಶನಗಳಿವೆ ಎಂದರು.
ಆಟೋ ಪ್ರಯಾಣದ ವೇಳೆ ಸಮಾಜಕ್ಕೆ ಮಾರಕವಾಗುವ ಬಗ್ಗೆ ಪ್ರಯಾಣಿಕರು ಮಾತುಕತೆ ಮಾಡುತ್ತಿದ್ದರೆ ಚಾಲಕರು ಅಂತಹದರ ಬಗ್ಗೆ ನಿಗಾ ವಹಿಸುವುದರ ಜೊತೆಗೆ ಮುನ್ನೆಚ್ಚರಿಕೆ  ವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು  ಆ ಮೂಲಕ ಅಪರಾಧ ತಡೆಗೆ ಸಹಕರಿಸಬೇಕು  ಎಂದರು.
ಆಟೋ ಚಾಲಕರಲ್ಲಿ ಕನ್ನಡ ಭಾಷೆ ಅಭಿಮಾನ ಹೆಚ್ಚು ಹಾಗಾಗಿ ಎಲ್ಲಾ ನಿಲ್ದಾಣಗಳಲ್ಲಿ ರಾಜ್ಯೋತ್ಸವದ ವೈಭವ ಕಂಡುಬರುತ್ತಿದೆ, ಪೊಲೀಸರ ಸೇವೆ ಸರ್ಕಾರಿ ಸೇವೆಯಾದರೆ ಆಟೋ ಚಾಲಕರದ್ದು ಸಮಾಜ ಸೇವೆಯಾಗಿದೆ, ಅಪಘಾತ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಆಟೋಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ ಚಾಲಕರು ನಿಸ್ವಾರ್ಥತೆಯಿಂದ ಗಾಯಾಳುಗಳ ರಕ್ಷಣೆಗೆ ನಿಲ್ಲುತ್ತಾರೆ ಎಂದು ಆಟೋ ಚಾಲಕರ ಸೇವೆಯನ್ನು ಸ್ಮರಿಸಿದರು.
ಆಟೋ ಚಾಲಕರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ವಾಹನ ಚಾಲನಾ ಪರವಾನಗಿ, ವಿಮೆ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು ಹಾಗೊಮ್ಮೆ  ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಯಾವುದೇ ದಾಖಲಾತಿ ಇಲ್ಲದಿದ್ದರೆ   ತಮಗೂ ಮತ್ತು ಪ್ರಯಾಣಿಕರಿಗೂ ದೊಡ್ಡ ನಷ್ಟವಾಗಲಿದೆ ಇದರ ಬಗ್ಗೆ ಎಚ್ಚೆತ್ತು ಮುನ್ನಡೆಯಬೇಕು ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು ಅದೇ ರೀತಿ ಹೆಚ್ಚು ದರ ವಸೂಲಿ ಮಾಡದೆ ನಿರ್ದಿಷ್ಟ ದರ ಪಡೆಯಬೇಕು ಎಂದರು.
ಆರೋಗ್ಯದ ಬಗ್ಗೆ ಚಾಲಕರು ಹೆಚ್ಚಿನ ನಿಗಾ ವಹಿಸಬೇಕು, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿ. ಆರೋಗ್ಯದ ಬಗ್ಗೆ ಅಸಡ್ಡೆ ತೋರಿದರೆ ಅನಾರೋಗ್ಯದ ವೇಳೆ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ, ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಕುಟುಂಬದವರ ಆರೋಗ್ಯ ಕಾಳಜಿ ವಹಿಸಿದರೆ ಭವಿಷ್ಯದ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಿಕ್ಕ ಮಂಡ್ಯ, ನಗರಸಭೆ ಮಾಜಿ ಸದಸ್ಯ ಶಿವಪ್ರಕಾಶ್ ಬಾಬು, ಸುಧಾ ಹನುಮ, ಜೈ ಕರ್ನಾಟಕ ಆಟೋ ಚಾಲಕರ ನಿಲ್ದಾಣದ ಅಧ್ಯಕ್ಷ ಯತಿರಾಜ್, ರಾಮಣ್ಣ, ಪುರುಷೋತ್ತಮ, ವಿವೇಕಾನಂದ, ಸೋಮ, ಮಹೇಶ್, ಆನಂದ, ಸಿದ್ದರಾಜು, ಶಿವಲಿಂಗು, ಸುರೇಶ್ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments