ಮಂಡ್ಯ: ಶೀಘ್ರವೇ ಬೆಳೆ ನಷ್ಟ ಪರಿಹಾರ ವಿತರಿಸಿ ನಾಲೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ರೈತ ಸಂಘದ ಮುಖಂಡ ಕೆಂಪೂಗೌಡ ಆಗ್ರಹಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ರಾಜ್ಯ ಸರ್ಕಾರ ಕರ್ನಾಟಕದ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಆದರೆ ಇದುವರೆಗೂ ಪರಿಹಾರ ನೀಡಿಲ್ಲ ಎಂದು ದೂರಿದರು.
ಒಣ ಭೂಮಿಗೆ ಮಾತ್ರ ಪರಿಹಾರ ನೀಡುತ್ತೇವೆ ಎನ್ನುವ ಸರ್ಕಾರದ ಕ್ರಮ ಸರಿಯಲ್ಲ .ತೆಂಗು ಮತ್ತು ಅಡಿಕೆ ಬಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಆದಷ್ಟು ತ್ವರಿತವಾಗಿ ರೈತರ ಖಾತೆಗೆ ಪರಿಹಾರ ಹಣ ಕಳುಹಿಸಬೇಕು ಎಂದು ಒತ್ತಾಯಿಸಿದರು .
ವಿ ಸಿ ನಾಲೆ ಆಧುನಿಕರಣ ಕಾಮಗಾರಿ ಪ್ರಾರಂಭವಾಗಿದ್ದು ಆದರೆ ಕೆಲಸ ಕುಂಟುತ್ತ ಸಾಗಿದೆ,40 ಕಿಲೋಮೀಟರ್ ಕಾಮಗಾರಿಯಲ್ಲಿ 18 ಕಿಲೋಮೀಟರ್ ನಷ್ಟು ಕಾಮಗಾರಿ ಮುಗಿದಿದ್ದು ಇನ್ನೂ ಶೇ 60ರಷ್ಟು ಕಾಮಗಾರಿ ಬಾಕಿ ಉಳಿದಿದೆ, ಜೂನ್ ಕೊನೆಯ ಹಂತದಲ್ಲಿ ನಾಲೆಗೆ ನೀರು ಬರುತ್ತದೆ. ಆಗ ಕಾಮಗಾರಿ ನಡೆಸಲು ಆಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು .
ಜೊತೆಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು .ಮನಮುಲ್ ಹಾಲು ನೀರು ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು .
ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ರವಿಕುಮಾರ್ ,ಗೋವಿಂದೇಗೌಡ, ನಾಗರಾಜು ಇತರರಿದ್ದರು.