ಕೆ ಎಂ ದೊಡ್ಡಿ :- ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮಣಿಗೆರೆ ಬಳಿ ನಡೆದಿದೆ.
ಟೆಂಪೋ ಚಾಲಕ ದುರ್ಗೇಶ್ (21), ಕಾರು ಚಾಲಕ ರಾಜೇಶ್ (28), ಕಾರಿನಲ್ಲಿದ್ದ ಅಭಿ, ಚಂದನ್, ಮೋಹನ, ಬಾಲ, ಟೆಂಪೋದಲ್ಲಿದ್ದ ಕಾಂತರಾಜೇ ಅರಸ್, ವರಲಕ್ಷ್ಮೀ, ಶೆಟ್ಟಮ್ಮಣ್ಣಿ ನಾಗರಾಜೇ ಅರಸ್, ಕಾಂಚನ ತೀವ್ರ ಗಾಯಗೊಂಡಿದ್ದು ಇನ್ನುಳಿದವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಮಡೇನಹಳ್ಳಿ ಗ್ರಾಮದ ದುರ್ಗೇಶ್ ಗೂಡ್ಸ್ ಟೆಂಪೋದಲ್ಲಿ ತೊರೆ ಬೊಮ್ಮನಹಳ್ಳಿ ಗ್ರಾಮದಿಂದ 25 ಮಂದಿಯನ್ನು ಮೂಗನಕೊಪ್ಪಲು ಗ್ರಾಮಕ್ಕೆ ಕರೆದೊಯ್ಯುತ್ತಿದ್ದರು, ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿಗಳಿದ್ದ ಕಾರಿಗೆ ಮಣಿಗೆರೆ ಬಳಿ ಢಿಕ್ಕಿ ಹೊಡೆದಿದೆ .
ಗೂಡ್ಸ್ ಟೆಂಪೋ ರಸ್ತೆ ಮಧ್ಯ ಭಾಗದಲ್ಲಿ ಮಗುಚಿ ಬಿದಿದ್ದು, ಟೆಂಪೋದೊಳಗೆ ಕುಳಿತಿದ್ದವರಿಗೆ ಗಾಯಗಳಾಗಿದೆ. ಕಾರು ಸಹ ಜಖಂಗೊಂಡಿದ್ದು, ಕಾರಿನಲ್ಲಿದ್ದ 5 ಮಂದಿಗೂ ಗಂಭೀರ ಸ್ವರೂಪದ ಪೆಟ್ಟಾಗಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತ ನಡೆದ ಸ್ಥಳ ಮತ್ತು ಮಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಡಾ.ಸ್ಮಿತಾರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.